ಮೂಡಲ ಮನೆಯ

ದ. ರಾ. ಬೇಂದ್ರೆ

ಮೂಡಲ ಮನೆಯ ಮುತ್ತಿನ ನೀರಿನ

ಎರಕಾವ ಹೊಯ್ದಾ

ನುಣ್ಣ-ನ್ನೆರಕsವ ಹೊಯ್ದಾ || ಪ ||

ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲಾ ತೊಯ್ದಾ

ಹೋಯ್ತೋ ಜಗವೆಲ್ಲಾ ತೊಯ್ದಾ ||

ರತ್ನದ ರಸದಾ ಕಾರಂಜೀಯು

ಪುಟಪುಟನೇ ಪುಟಿದು

ತಾನೇ ಪುಟ ಪುಟನೇ ಪುಟಿದು ||

ಮಘಮಘಿಸುವಾ ಮುಗಿದ ಮೋಗ್ಗೀ

ಪಟಪಟನೇ ಒಡೆದು

ತಾನೇ ಪಟಪಟನೇ ಒಡೆದು ||

ಎಲೆಗಳ ಮೇಲೆ ಹೂಗಳ ಒಳಗೆ

ಅಮೃತದ ಬಿಂದು

ಕಂಡವು ಅಮೃತದs ಬಿಂದು ||

ಯಾರಿರಿಸಿರುವರು ಮುಗಿಲs

ಮೇಲಿಂದಿಲ್ಲಿಗೆ ತಂದು

ಈಗ ಇಲ್ಲಿಗೇ ತಂದು ||

ತಂಗಾಳಿಯಾ ಕೈಯೊಳಗಿರಿಸಿ

ಎಸಳಿನಾ ಚವರಿ

ಹೂವಿನ ಎಸಳಿನಾ ಚವರಿ ||

ಹಾರಿಸಿಬಿಟ್ಟರು ತುಂಬಿಯ ದಂಡು

ಮೈಯೆಲ್ಲಾ ಸವರಿ

ಗಂಧಾ ಮೈಯೆಲ್ಲಾ ಸವರಿ ||

ಗಿಡಗಂಟೆಗಳಾ ಕೊರಳೊಳಗಿಂದ

ಹಕ್ಕಿಗಳಾ ಹಾಡೂ

ಹೊರಟಿತು ಹಕ್ಕಿಗಳಾ ಹಾಡು ||

ಗಂಧರ್ವರಾ ಸೀಮೆಯಾಯಿತು

ಕಾಡಿನಾ ನಾಡು

ಕ್ಷಣದೊಳು ಕಾಡಿನಾ ನಾಡು ||

ಕಂಡಿತು ಕಣ್ಣು ಸವಿದಿತು ನಾಲಗೆ

ಪಡೆದೀತೀ ದೇಹ

ಸ್ಪರ್ಶಾ ಪಡೆದೀತೀ ದೇಹ ||

ಕೇಳಿತು ಕಿವಿಯು ಮೂಸಿತು ಮೂಗು

ತನ್ಮಯವೀ ಗೇಹ

ದೇವರ-ದೀ ಮನಸಿನ ಗೇಹಾ ||

ಅರಿಯಿದು ಅಳವು ತಿಳಿಯದು ಮನವು

ಕಾಣsದೋ ಬಣ್ಣಾ

ಕಣ್ಣಿಗೆ ಕಾಣsದೋ ಬಣ್ಣಾ ||

ಶಾಂತಿರಸವೇ ಪ್ರೀತಿಯಿಂದಾ

ಮೈದೋರಿತಣ್ಣಾ

ಇದು ಬರೀ ಬೆಳಗಲ್ಲೋ ಅಣ್ಣಾ ||